ಕರ್ಪೂರ ಶ್ರೀನಿವಾಸರಾವ್ (೧೮೬೩ - ಜೂನ್ ೨, ೧೯೩೨) ಅವರು.ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಾಹಿತ್ಯ ಪೋಷಕರಾಗಿ ಕಂಗೊಳಿಸಿದ ಮಹಾನ್ ಸಾಧಕರು. == ಜೀವನ == ಕರ್ಪೂರ ಶ್ರೀನಿವಾಸರಾವ್ ಇವರು ೧೮೬೩ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ. == ವಿದ್ಯಾಭ್ಯಾಸ ಮತ್ತು ಉದ್ಯೋಗ == ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು. ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು. == ಸಾಧನೆ == ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ. ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು. ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. == ಹಿರಿಮೆ == ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1933ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು. ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮರಾಯರಿಗೆ ಪುಸ್ತಕ ಪ್ರಕಟಣೆಗೆಂದೇ ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು. ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ. == ಸಾಹಿತ್ಯ == ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ. == ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ == ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. == ವಿದಾಯ == ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ ೨, ೧೯೩೨ರಂದು ಈ ಲೋಕವನ್ನಗಲಿದರು. == ಮಾಹಿತಿ ಕೃಪೆ == ಎಸ್. ವಿ. ಶ್ರೀನಿವಾಸರಾವ್ ಅವರ ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.